ಬೆಕ್ಟಿ
ಪರ್ಸಿಫಾರ್ಮಿಸ್ ಗಣದ ಲ್ಯಾಟಿಡೀ ಕುಟುಂಬಕ್ಕೆ ಸೇರಿದ ಅಸ್ಥಿಮೀನು. ಇವುಗಳಿಗೆ ಕಾಕ್ ಆಪ್, ಜೈಂಟ್ ಪರ್ಚ್, ಸೀಬಾಸ್ ಎಂಬ ಹೆಸರುಗಳುಂಟು. ಇದರ ಶಾಸ್ತ್ರೀಯ ನಾಮ ಲ್ಯಾಟಿಸ್ ಕ್ಯಾಲ್‍ಕೆರಿಫರ್. ನೈಲ್ ನದಿಯ ಅಳಿವೆ, ಪಾಕಿಸ್ತಾನ, ಭಾರತದಿಂದ ಹಿಡಿದು ಮಲಯ ದ್ವೀಪ ಸ್ತೋಮಗಳು, ಚೀನ ಮತ್ತು ಆಸ್ಟ್ರೇಲಿಯಗಳ ಕರಾವಳಿ ಪ್ರದೇಶಗಳಲ್ಲಿ ಈ ಮೀನುಗಳು ವಾಸಿಸುತ್ತವೆ. 

	ಬೆಕ್ಟಿ ಸುಮಾರು 1.5ಮೀ ಉದ್ದ ಬೆಳೆಯುತ್ತದೆ. ಇದರ ದೇಹ ಕಿರಿಯಗಲವಾಗಿದ್ದು ಉದ್ದವಾಗಿದೆ. ಬಾಯಿ ಅಗಲವಾಗಿದ್ದು ಮುಂಚಾಚಿಕೊಂಡಿದೆ. ದವಡೆ ಮತ್ತು ಬಾಯಂಗಳದಲ್ಲಿ ಮೃದುವಾದ ಹಲ್ಲುಗಳುಂಟು. ಬೆನ್ನಿನ ಮೇಲೆ 2 ಈಜುರೆಕ್ಕೆಗಳಿವೆ. ಬೆನ್ನಿನ ಮೊದಲ ಈಜುರೆಕ್ಕೆಯಲ್ಲಿ ಗಡುಸಾದ 7-8 ಮುಳ್ಳುಗಳಿವೆ. ಇವುಗಳ ಪೈಕಿ 3ನೆಯ ಮುಳ್ಳು ಉಳಿದ ಮುಳ್ಳುಗಳಿಗಿಂತ ಉದ್ದ. ಗುದದ್ವಾರದ ಈಜುರೆಕ್ಕೆಯಲ್ಲಿ 3 ಮುಳ್ಳುಗಳುಂಟು. ಇವುಗಳಲ್ಲಿ 3ನೆಯ ಮುಳ್ಳು ಬಲು ಉದ್ದ ಮತ್ತು ಗಡಸು. ಹೊಟ್ಟೆಯ ಈಜುರೆಕ್ಕೆಗಳಿಗಿಂತ ಎದೆಯ ಈಜುರೆಕ್ಕೆಗಳು ಸ್ವಲ್ಪ ಮೋಟು ಮತ್ತು ದುಂಡು. ಬಾಲದ ಈಜುರೆಕ್ಕೆ ಗುಂಡಗಿದೆ. ದೇಹದ ಬೆನ್ನು ಭಾಗ ಹಸಿರು ಮಿಶ್ರಿತ ಬೂದು ಬಣ್ಣದ್ದಾಗಿದೆ. ಹೊಟ್ಟೆಯ ಭಾಗ ಬಿಳಿ. ಆದರೆ ಮಳೆಗಾಲದಲ್ಲಿ ಮಾತ್ರ ಊದಾ ಬಣ್ಣದ ಛಾಯೆ ಕಾಣಿಸಿಕೊಳ್ಳುತ್ತದೆ. ಸಾಧಾರಣವಾಗಿ ಕಪ್ಪು ಬಣ್ಣದ ಮೀನು ಪ್ರಾಯಕ್ಕೆ ಬಾರದ ಮೀನು. ಬೆಕ್ಟಿಯ ಅಚ್ಚುಮೆಚ್ಚಿನ ನೆಲೆ ಕರಾವಳಿ ಪ್ರದೇಶ, ಅಳಿವೆ, ಚೌಳು ನೀರು, ಹಿನ್ನೀರು ಮತ್ತು ಹರವುಗಳಾದರೂ ತನ್ನ ಆಹಾರವಾದ ಸಣ್ಣ ಪುಟ್ಟ ಮೀನುಗಳನ್ನು ಹಿಡಿದು ತಿನ್ನಲು ಅಳಿವೆಗಳನ್ನು ಬಿಟ್ಟು ನದಿಗಳನ್ನು ಪ್ರವೇಶಿಸಿ ಒಳನಾಡಿಗೆ ಬರುವುದುಂಟು. 

	ಪಶ್ಚಿಮ ಬಂಗಾಳ ರಾಜ್ಯದಲ್ಲಿ ಬೆಕ್ಟಿ ಬಹಳ ಮುಖ್ಯವಾದ ಆಹಾರ ಮೀನು ಎಂದು ಪ್ರಸಿದ್ಧವಾಗಿದೆ. ಇದರ ಮರಿಗಳನ್ನು ಅಳಿವೆ, ಚೌಳು ನೀರು ಹಿನ್ನೀರು ಮತ್ತು ಹರವುಗಳಲ್ಲಿ ಮುಂಗಾರು ಮಳೆಯ ಮೊದಲೇ ಹಿಡಿದು ನದೀ ಮುಖಜ ಭೂಮಿಯಲ್ಲಿಯ ಉಪ್ಪುನೀರಿನ ಕೊಳಗಳಲ್ಲಿ ಇತರ ಬಗೆಯ ಮೀನು ಮರಿಗಳ ಜೊತೆಯಲ್ಲಿ ಬೆಳೆಸುವುದು ರೂಢಿ. ಇದನ್ನು ಸಿಹಿ ನೀರಿನ ಕೊಳಗಳಲ್ಲೂ ಸಾಕಬಹುದೆನ್ನಲಾಗಿದೆ. ಇವುಗಳ ಗಾಳಿಚೀಲಗಳಿಂದ ಮೀನಂಟು ವಜ್ರ (ಐಸಿಂಗ್ಲಾಸ್) ತಯಾರಿಸಲಾಗುತ್ತದೆ.  ಬೆಚುವಾನಾಲ್ಯಾಂಡ್ (ನೋಡಿ- ಬಾಟ್ಸ್‍ವಾನ)          									
(ಕೆ.ವಿ.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ